ಕಾಡುದಾಲ್ಚಿನ್ನಿ

ಲಾರೇಸೀ ಕುಟುಂಬ ಕ್ಕೆ ಸೇರಿದ ಸಿನಮೋಮಮ್ ಟಮಾಲ ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ಮರ. ದಾಲ್ಚಿನ್ನಿ ಅಥವಾ ಚಕ್ಕೆ (ಸಿನಮೋಮಮ್ ಜಿûಲಾನಿಕ) ಗಿಡದ ಹತ್ತಿರ ಸಂಬಂಧಿ. ಹಿಮಾಲಯದ ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳ, ಬಂಗಾಳದ ಖಾಸಿ ಮತ್ತು ಜೈಂತಿಯ ಬೆಟ್ಟಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಸಿಲೆಟ್ ಜಲ್ಲೆಯ ಜೈಂತಿಯ ಪರಣಗಳಲ್ಲಿ ಸುಮಾರು 600 ಎಕರೆಗಳಷ್ಟು ತೋಟ ಪ್ರದೇಶದಲ್ಲಿ ಬೆಳೆಸುತ್ತಾರೆ. ಸುಮಾರು 25'-30' ಎತ್ತರಕ್ಕೆ ಬೆಳೆಯುವ ಮಧ್ಯಮಗಾತ್ರದ ಮರ ಇದು. ಇದರ ಕಾಂಡದ ದಪ್ಪ ಸಾಮಾನ್ಯವಾಗಿ 4'-41/2'. ಮಾರ್ಚ-ಏಪ್ರಿಲ್ ತಿಂಗಳಿನಲ್ಲಿ ಬೀಜಗಳನ್ನು ನರ್ಸರಿಗಳಲ್ಲಿ ಮೊಳೆಯಲು ಹಾಕುತ್ತಾರೆ. 30-45 ದಿವಸಗಳಲ್ಲಿ ಮೊಳಕೆ ಬರುತ್ತದೆ. 4-5 ವರ್ಷ ವಯಸ್ಸಿನ ಸಸಿಗಳನ್ನು ನೆಡಲು ಸ್ಥಳಾಂತರ ಮಾಡುತ್ತಾರೆ. ಇವುಗಳ ಜೊತೆಗೆ ನೆರಳು ನೀಡುವ ಸಸ್ಯಗಳನ್ನು ಬೆಳೆಸುವುದು ಸಾಮಾನ್ಯ ರೂಢಿ. ಆದರೆ 8-9 ವರ್ಷಗಳಾದ ಮೇಲೆ ಈ ನೆರಳು ನೀಡುವ ಸಸ್ಯಗಳನ್ನು ಕಡಿದುಹಾಕುತ್ತಾರೆ. ಈ ಮರದ ಎಲೆ ಮತ್ತು ತೊಗಟೆ ಮುಖ್ಯವಾಗಿ ಉಪಯೋಗಕ್ಕೆ ಬರುವ ಭಾಗಗಳು. ಇವನ್ನು ಸಂಬಾರ ಪದಾರ್ಥವಾಗಿ ಉಪಯೋಗಿಸುವರು. 10 ವರ್ಷ ವಯಸ್ಸಾದ ಮರಗಳೇ ಎಲೆ ಕೊಯ್ಯಲು ಯೋಗ್ಯವಾದವು. ಎಳೆಯ ಮರಗಳಿಂದ ವರ್ಷಕ್ಕೊಮ್ಮೆ, ಸ್ವಲ್ಪ ವಯಸ್ಸಾದ ಮರಗಳಿಂದ ಎರಡು ವರ್ಷಗಳಿಗೊಮ್ಮೆ ಎಲೆಗಳನ್ನು ಕೊಯ್ಯುತ್ತಾರೆ. ಈ ಕಾರ್ಯ ಸಾಮಾನ್ಯವಾಗಿ ಅಕ್ಟೋಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆಯುವುದು. ಒಂದು ಸಾಧಾರಣ ಗಾತ್ರದ ಮರದಿಂದ ಒಂದು ವರ್ಷಕ್ಕೆ 20-25 ಪೌಂಡುಗಳಷ್ಟು ಒಣಗಿದ ಎಲೆಯನ್ನು ಪಡೆಯಬಹುದು. ಮಾರುಕಟ್ಟೆಗೆ ಕಳುಹಿಸುವ ಮುನ್ನ 4-5 ದಿನ ಸೂರ್ಯನ ಬಿಸಿಲಿನಲ್ಲಿ ಎಲೆಗಳು ಒಣಗಬೇಕು.

 ಕಾಶ್ಮೀರದಲ್ಲಿ ಈ ಮರದ ಎಲೆಗಳನ್ನು ವೀಳೆಯದೆಲೆಗಳ ಬದಲಾಗಿ ಉಪಯೋಗಿಸುವರು. ಕೆಲವು ವೇಳೆ ಬಟ್ಟೆಗಳಿಗೆ ಬಣ್ಣ ಹಾಕುವಾಗ ಅವನ್ನು ಸ್ವಚ್ಚಗೊಳಿಸುವುದಕ್ಕೆ ಇದರ ಎಲೆಗಳನ್ನು ಬಳಸುವುದೂ ಉಂಟು. ಎಲೆಗಳು ಜೀರ್ಣಕಾರಕ; ಆಮಶಂಕೆ ಮತ್ತು ಹೊಟ್ಟೆನುಲಿತಗಳನ್ನು ಗುಣಪಡಿಸಲು ಬಳಸುವರು. ಕಾಡು ದಾಲ್ಚಿನ್ನಿ ಮರದ ತೊಗಟೆ ದಾಲ್ಚಿನ್ನಿಯಂತೆಯೇ ಸುವಾಸನಾಯುಕ್ತವಾಗಿದೆ. ಆದರೆ ದಾಲ್ಚಿನ್ನಿಗಿಂತ ಸ್ವಲ್ಪ ಒರಟು. ದಾಲ್ಚಿನ್ನಿಯೊಂದಿಗೆ ಕಲಬೆರಕೆ ಮಾಡುವುದೂ ಉಂಟು. ತೊಗಟೆಯಿಂದ ತೆಳುಡಳದಿ ಬಣ್ಣದ ಚಂಚಲತೈಲವನ್ನು ತಯಾರಿಸುತ್ತಾರೆ. ಇದರಲ್ಲಿ ಸೇಕಡ 70-85ರಷ್ಟು ಸಿನಮಿಕ್ ಆಲ್ಡಿಹೈಡುಗಳ ಕೃತಕ ಸಂಶ್ಲೇಷಣೆಯಿಂದ ಈ ಎಣ್ಣೆಯ ಬಳಕೆ ಇತ್ತೀಚೆಗೆ ಬಹಳ ಇಳಿದಿದೆ.

 

(ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ